ಬ್ರಿಜ್ - 	ಇಸ್ಟೀಟು ಎಲೆಯ ಒಂದು ಆಟ. ಇದರೆ ಮೂಲ ವಿಸ್ಟ್. ವಿಸ್ಟ್‍ನ ಮುಂದುವರಿಂದ ರೂಪಾಂತರದೇ ಬ್ರಿಜ್. ಇದನ್ನು ಆಡಲು ನಾಲ್ಕು ಜನರಿಬೇಕು. 1894ರಲ್ಲಿ ಈ ಆಟದ ಒಂದು ರೂಪುರೇಷೆ ಸಿದ್ಧವಾಯಿತು ಎನ್ನಲಾಗಿದೆ. ಬ್ರಿಜ್‍ವಿಸ್ಟ್, ಬ್ರಿಜ್ ಕಾಂಟ್ರಾಕ್ಟ್, ಬ್ರಿಜ್‍ಆಕ್ಷನ್ ಇವೆಲ್ಲ ಈ ಆಟದ ಗುಂಪಿಗೆ ಸೇರಿದವು. ಈ ಆಟಗಳ ಮುಖ್ಯ ಅಂಶ ತುರುಪು. ಆಟದಲ್ಲಿ 52 ಎಲೆಗಳನ್ನು ಉಪಯೋಗಿಸಿ ಪ್ರತಿ ಆಟಗಾರನಿಗೂ 13 ಎಲೆಗಳನ್ನು ಹಂಚಲಾಗುತ್ತದೆ. ಇದರಲ್ಲಿ ಹೆಚ್ಚಿನ ಮೌಲ್ಯದ ಎಲೆ ಹಾಸು ಅನಂತರ ರಾಜ, ರಾಣಿ, ಗುಲಾಮ, ಹತ್ತು ಇತ್ಯಾದಿ.

	ಇದರಲ್ಲಿ ಎಲೆ ಕಲಸಿ ಹಂಚಿದವರೇ ಆಟ ಮಾಡಿಕೊಳ್ಳಬೇಕು. ಎಲೆ ಕಲಸಿದಾತ ತನ್ನಲ್ಲಿಯ ಎಲೆಗಳಿಗೆ ಅನುಗುಣವಾಗಿ ತಾನು ಆಡುವ ಆಟ ಯಾವುದು ತುರುಪೆ? ತುರುಪಿಲ್ಲದ್ದೆ ಎಂದು ಹೇಳುತ್ತಾನೆ. ಮೊದಲಿಗೆ ಆರುಪಟ್ಟುಗಳನ್ನು ಕಡ್ಡಾಯವಾಗಿ ಪಡೆಯಬೇಕು. ಪ್ರತಿ ರಂಗಿನ ಶ್ರೇಣಿಗೆ ಇರುವ ಬೆಲೆಗಳೇ ಬೇರೆ. ಎಲ್ಲ ಪಟ್ಟುಗಳು ಎಂದರೆ 13 ಪಟ್ಟುಗಳು ಬಂದರೆ ಗ್ರಾಂಡ್‍ಸ್ಲಾಮ್. ಒಂದು ಕಡಿಮೆ ದೊರೆತರೆ ಲಿಟ್ಲ್‍ಸ್ಲಾಮ್. ಮೂರು ಹಾಸು ಅಥವಾ ರಾಣಿ ಎಲೆಗಳು ಕೈಲಿ ಇದ್ದರೆ ಹೆಚ್ಚಿನ ಅಂಕಗಳು ದೊರೆಯುತ್ತವೆ. ಎರಡು ಆಟಗಳನ್ನು ಮಾಡಿಕೊಂಡರೆ ಅವರು ರಬ್ಬರ್ ಗೆದ್ದಂತೆ.

	ಆಕ್ಷನ್ ಬ್ರಿಜ್ ಆಟದಲ್ಲಿ ಆಟ ಮಾಡಿಕೊಳ್ಳುವ ಹಕ್ಕು ಹರಾಜಾಗುತ್ತದೆ. ಅಂದರೆ ಆಟದ ಹಕ್ಕು ಆಟಗಾರರು ಸೇರಿದಂತೆ ವರ್ಗವಾಗುತ್ತದೆ. ಒಬ್ಬೊಬ್ಬರು ಸಾರುವಿಕೆಗೂ ಅವರು ಮಾಡಿಕೊಳ್ಳಬೇಕಾದ ಪಟ್ಟುಗಳ ಸಂಖ್ಯೆ ಏರುತ್ತಿರುತ್ತದೆ. ಅತಿ ಹೆಚ್ಚು ಹೇಳಿದವರಿಗೆ ಆಟ ಮಾಡಿಕೊಳ್ಳುವ ಹಕ್ಕು ನಿಲ್ಲುತ್ತದೆ. ಆಟ ಹೇಳಿದವರು ಆಟ ಮಾಡಿಕೊಳ್ಳದೆ ಹೋದರೆ ಗೆಲ್ಲಂಕಗಳನ್ನು ಎದುರಾಳಿ ಆಟಗಾರರ ಲೆಕ್ಕಕ್ಕೆ ಸೇರಿಸಲಾಗುತ್ತದೆ.

	ಕಾಂಟ್ರಾಕ್ಟ್ ಬ್ರಿಜ್ ಆಟದಲ್ಲಿ ಎರಡು ಪ್ರಧಾನ ಅಂಶಗಳನ್ನು ಗಮನಿಸಬಹುದು. ಆಟ ಸಾರುವುದು ಮತ್ತು ಆಟ ಆಡುವುದು. ಆಟ ಸಾರುವುದು ಆರಂಭವಾದ ಮೇಲೆ ಒಂದು ಶ್ರೇಣಿಯಲ್ಲಿ ಮೂರು ಜನ ಆಟಗಾರರು ಆಟ ಇಲ್ಲ ಎಂದಾಗ ಆಟ ಮಾಡಿಕೊಳ್ಳುವ ಹೊಣೆ ಆ ಮೂವರಿಗಿಂತ ಮೊದಲು ಸಾರಿದ ಆಟಗಾರನದಾಗುತ್ತದೆ. ಸಾಮಾನ್ಯವಾಗಿ ಕೈನಲ್ಲಿಯೇ ಹತ್ತು ಅಂಕಗಳಿಗಿಂತ ಹೆಚ್ಚಿನ ಮೌಲ್ಯದ ಎಲೆಗಳಿದ್ದರೆ ಮಾತ್ರ ಮೊದಲಿಗೆ ಆಟ ಹೇಳಬಹುದು. ಹಾಸಿಗೆ 4 ಅಂಕ, ರಾಜನಿಗೆ 3, ರಾಣಿಗೆ 2, ಗುಲಾಮನಿಗೆ ಒಂದು ಅಂಕವನ್ನೂ ಅನ್ವಯಿಸಿ ಎಲೆಗಳ ಒಟ್ಟು ಮೌಲ್ಯ ನಿರ್ಧರಿಸಬೇಕು. 14 ಅಂಕಗಳು ಇದ್ದವರು ಆಟ ಹೇಳಬೇಕು.

	ಆಟ ಮಾಡಿಕೊಳ್ಳುವುದರ ಬಗೆಗೆ ಸಾರುವುದೆಲ್ಲ ಮುಗಿದ ಬಳಿಕ ಯಾರಿಗೆ ಬಂದು ನಿಲ್ಲುತ್ತದೆಯೋ ಅವರು-ತುರುಪು ಹೇಳಿದವರ ಎಡಗಡೆಯವರು-ಎಲೆ ಇಳಿಸಿ ಆಟ ಆರಂಭಿಸುತ್ತಾರೆ. ಅನಂತರ ತುರುಪು ಹೇಳಿದವರು ಜೊತೆಗಾರರು ತಮ್ಮ ಎಲೆಗಳನ್ನೆಲ್ಲ ಇಳಿಸಿ ಮೇಲು ಮುಖವಾಗಿ ಇಡುತ್ತಾರೆ. ಆಟ ಹೇಳಿದವರು ಎರಡು ಕಡೆಯ ಎಲೆಗಳನ್ನು ಇಳಿಸಿ ಆಡಬೇಕು. ಗುರುತಿಗೋಸ್ಕರ ಆಟಗಾರರನ್ನು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂದು ಕರೆಯುತ್ತಾರೆ. ಒಂದು ಇಳಿತದಲ್ಲಿ ಆ ರಂಗು ಇಲ್ಲದೆ ತುರುಪಿನಿಂದ ಹೊಡೆದಾಗ ಮಾತ್ರ ಪಟ್ಟು ದೊರಕುತ್ತದೆ. ಆ ರಂಗು ಇಲ್ಲದೆ ತುರುಪಿನಿಂದ ಹೊಡದಾಗ ಮಾತ್ರ ಪಟ್ಟು ಇನ್ನೊಬ್ಬರಿಗೆ ಹೋಗುತ್ತದೆ. ತುರುಪಿಲ್ಲದೆ ಆಟದ ಮೂರು ಪಟ್ಟುಗಳಿಗೆ ಒಂದು ಆಟ. ತುರುಪು ಇಸ್ಟೀಟಾದರೆ ನಾಲ್ಕು ಪಟ್ಟು ಅಟೀನ್ ಆದರೆ ನಾಲ್ಕು ಪಟ್ಟು ಡೈಮಂಡ್ ಹಾಗೂ ಕಳಾವರ್‍ಗಳಲ್ಲಿ ಐದು ಪಟ್ಟುಗಳು ಬಂದರೆ ಒಂದು ಆಟವಾಗುತ್ತದೆ. ಒಂದು ಆಟದ ಅಂಕಗಳನ್ನು ಭಾಗಶಃ ಮಾಡಿಕೊಳ್ಳುತ್ತ ನೂರು ಅಂಕಗಳನ್ನು ಸೇರಿಸಬಹುದು.

	ಬ್ರಿಜ್ ಆಟದ ಟೂರ್ನ್‍ಮೆಂಟುಗಳು ನಡೆಯುತ್ತವೆ. ಅಂತರರಾಷ್ಟ್ರೀಯ ಟೂರ್ನ್‍ಮೆಂಟುಗಳೂ ಇವೆ. ಈ ಸ್ಪರ್ಧೆಗಳು ಒಲಿಂಪಿಕ್ ಆಟಗಳಷ್ಟೇ ಮಹತ್ತ್ವದ್ದಾಗಿರುತ್ತವೆ. ಪಾಶ್ಚಾತ್ಯದೇಶಗಳಲ್ಲಿ ಮುಖ್ಯವಾಗಿ ಇದನ್ನು ಬುದ್ಧಿಪ್ರಧಾನವಾದ ಆಟವೆಂದು ಪರಿಗಣಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಕುರಿತಂತೆ 9000ಕ್ಕೂ ಮಿಕ್ಕಿರುವ ಪುಸ್ತಕಗಳು ಹೊರಬಂದಿವೆ. ಸುಮಾರು ಒಂದುನೂರು ನಿಯತಕಾಲಿಕೆಗಳು 17 ದೇಶಗಳಲ್ಲಿ 13 ಭಾಷೆಗಳಲ್ಲಿ ಹೊರಬರುತ್ತಿವೆ ಎನ್ನಲಾಗಿದೆ. ಸುಮಾರು 5000ಕ್ಕೂ ಹೆಚ್ಚು ಕ್ಲಬ್‍ಗಳು ಇವೆ ಎಂದು ಅಂದಾಜು.									   
		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
										 (ಎ.ವಿ.ಕೆ.)